ನಿಸರ್ಗವಾಣಿ - ಕನ್ನಡ

ನಿಸರ್ಗವಾಣಿಯ ಮೂಲಕ ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಅನ್ವೇಷಿಸುವುದು

ಸದ್ಗುರು

ನಮ್ಮ ಭಾರತವರ್ಷದಲ್ಲಿ ಅನಾದಿ ಕಾಲದಿಂದಲೂ ಅಧ್ಯಾತ್ಮದ ಜ್ಞಾನಗಂಗೆಯು ವೇದ ಉಪನಿಷತ್ತು ಹಾಗೂ ತತ್ವದರ್ಶಿ ಋಷಿ ಮುನಿಗಳ ಸ್ವಾನುಭವಗಳ ಮೂಲಕ ನಿರಂತರವಾಗಿ ಹರಿದು ಬಂದಿದೆ. ಯುಗಯುಗಗಳಿಂದ ಅನೇಕ ಶಾಸ್ತ್ರೋಚಿತ ಸಂಪ್ರದಾಯಗಳು ಹಾಗೂ ತನ್ಮೂಲಕ ದಿವ್ಯ ಗುರು ಪರಂಪರೆಯ ಮಾಧ್ಯಮಗಳ ಮೂಲಕ ಅಂತಿಮ ಸತ್ಯದ ಬಗೆಗಿನ ಚಿಂತನೆ ಹಾಗೂ ಅನುಸಂಧಾನಗಳು ಅಖಂಡವಾಗಿ ನಡೆಯುತ್ತಲಿವೆ. ಇಂಥವೇ ಸಂಪ್ರದಾಯಗಳ ಪೈಕಿ ಇಂಚಗೇರಿ ಸಂಪ್ರದಾಯದ ದಿವ್ಯ ಗುರುಪರಂಪರೆಯಲ್ಲಿ ಶ್ರೀ ನಿಸರ್ಗದತ್ತ ಮಹಾರಾಜರು ಒಬ್ಬ ಮಹಾಪುರುಷರು.

ಜನೆವರಿ 2022ರಲ್ಲಿ ಶ್ರೀ ನಿಸರ್ಗದತ್ತ ಮಹಾರಾಜರ ಸಮಾಧಿಯ ಸ್ಥಾಪನೆಯನ್ನು ಅವರ ಗುರುಗಳಾದ ಶ್ರೀ ಸಿದ್ದರಾಮೇಶ್ವರ ಮಹಾರಾಜರ ಸನ್ನಿಧಿಯಲ್ಲಿಯೇ ಮುಂಬಯಿಯ ವಾಳಕೇಶ್ವರ ಬಾಣಗಂಗಾ ಎಂಬಲ್ಲಿ ಮಾಡಲಾಯಿತು.

ಶ್ರೀ ನಿಸರ್ಗದತ್ತ ಮಹಾರಾಜರ ಉಪದೇಶಗಳನ್ನು ಒಳಗೊಂಡ "I AM THAT" ಎಂಬ ಗ್ರಂಥವು ಒಂದು ಆಧುನಿಕ ಉಪನಿಷತ್ ಗ್ರಂಥವೇ ಆಗಿದ್ದು ಹೆಚ್ಚು ಕಡಿಮೆ ವಿಶ್ವದಲ್ಲಿರುವ ಎಲ್ಲ ಭಾಷೆಗಳಲ್ಲಿ ಅನುವಾದಗೊಂಡು, ಪ್ರಕಾಶಿತವಾಗಿ ಜಗತ್ತಿನ ಮೂಲೆಗಳನ್ನು ಮುಟ್ಟಿದೆ .

ಶ್ರೀ ನಿಸರ್ಗದತ್ತ ಮಹಾರಾಜರ ವಾಣಿ, ಅವರ ಅನೇಕ ಅಪ್ರಕಟಿತ ಗ್ರಂಥಗಳು ಹಾಗು ನಿರೂಪಣೆಗಳನ್ನು, ಮತ್ತು ಅದರೊಟ್ಟಿಗೆ ಇಂಚಗೇರಿ ಸಂಪ್ರದಾಯದ ಇತರ ಮಹಾಪುರುಷರ ಉಪದೇಶಗಳು ಅಲ್ಲದೆ ಅವರು ನಿರೂಪಿಸಿದ ವೇದ ಉಪನಿಷತ್ತುಗಳ ಅರ್ಥ ವಿವರಣೆಗಳು ಎಲ್ಲ ಉತ್ಸುಕ ಸಾಧಕರವರೆಗೆ ತಲುಪಲಿ ಎಂಬ ಪವಿತ್ರ ಭಾವನೆ ಇಟ್ಟುಕೊಂಡು "ನಿಸರ್ಗದತ್ತ ಚಾರಿಟೇಬಲ್ ಸಮಾಧಿ ಟ್ರಸ್ಟ್" ವತಿಯಿಂದ "ನಿಸರ್ಗವಾಣಿ" ಎಂಬ ಹೆಸರಿನಿಂದ ಆನ್ಲೈನ್ ತ್ರೈಮಾಸಿಕವನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಸಂಪ್ರದಾಯದಲ್ಲಿ ಅನೇಕ ಕನ್ನಡ ಭಾಷಿಕ ಸಂತರೂ ಇದ್ದದ್ದರಿಂದ ಅವರ ಉಪದೇಶ, ನಿರೂಪಣೆಗಳೂ ಎಲ್ಲ ಭಾಷಿಕರಿಗೆ ತಲುಪುವಂತಾಗಲಿ ಎಂಬ ಸದುದ್ದೇಶದಿಂದ ಈ ತ್ರೈಮಾಸಿಕವನ್ನು ಮರಾಠಿ, ಹಿಂದಿ, ಕನ್ನಡ ಹಾಗೂ ಆಂಗ್ಲ ಹೀಗೆ ನಾಲ್ಕು ಭಾಷೆಗಳಲ್ಲಿಯೂ ಪ್ರಕಾಶಿತಗೊಳಿಸುವದು ನಮ್ಮ ಉದ್ದೇಶವಾಗಿದೆ. ಈ ಪವಿತ್ರ ಉದ್ದೇಶವನ್ನು ಮನದಾಳದಲ್ಲಿ ಇಟ್ಟುಕೊಂಡು ತ್ರೈಮಾಸಿಕವನ್ನು ಸಂಪೂರ್ಣ ನಿಃಶುಲ್ಕವಾಗಿ ಇಡಲಾಗುತ್ತದೆ, ಮತ್ತು ಇದಕ್ಕಾಗಿ ಎಂಥದೇ ದೇಣಿಗೆಯ ಅವಶ್ಯಕತೆ ಇಲ್ಲ ಎಂಬುದನ್ನೂ ನಾವಿಲ್ಲಿ ತಿಳಿಸುವುದು ಆವಶ್ಯಕವೆಂದೆನಿಸುತ್ತದೆ.

ಜೈ ಸದ್ಗುರು. !

View Magazine